ಮೊದಲು ನಾವು ಮನೆ ಪಕ್ಕದ ಅಂಗಡಿಯಿಂದ ವಸ್ತುಗಳನ್ನು ಕೊಂಡಾಗ ಆ ವಸ್ತುವು ತಯಾರಕರಿಂದ ಅವನಿಗೆ ಹೇಗೆ ಬರುತ್ತದೆ ಮತ್ತು ಅದಕ್ಕೆ ನಾವು ಕೊಡುವ ಬೆಲೆಯಲ್ಲಿ ಯಾರಿಗೆಲ್ಲ ಎಷ್ಟು ಲಾಭವೆಂದು ನೋಡೋಣ.
ಉದಾಹರಣೆಗೆ ನಾವು 100 ರೂಪಾಯಿ ಮುದ್ರಿತ ಬೆಲೆಯ ಸಾಬೂನಿನ ವಿಷಯವನ್ನು ನೋಡೋಣ. ಕಾರ್ಖಾನೆಯಿಂದ ತಯಾರಾದ ಸಾಬೂನಿನ ಸರಕು ಮೊದಲು ಆಯಾ ರಾಜ್ಯದ C&F ಏಜಂಟರುಗಳ ಬಳಿ ಬರುತ್ತವೆ. ಈ ಸರಕು ಸಾವಿರದ ಲೆಕ್ಕದಲ್ಲಿರುತ್ತವೆ. ಈ C&F ಏಜಂಟರುಗಳು 3–4% ಲಾಭಾಂಶವನ್ನಿಟ್ಟುಕೊಳ್ಳುತ್ತಾರೆ. C&F ಏಜೆಂಟರುಗಳು ಸಾಧಾರಣವಾಗಿ ಜಿಲ್ಲೆಗೆ ಒಬ್ಬ ಡಿಸ್ಟ್ರಿಬ್ಯೂಟರಗಳನ್ನು ನೇಮಿಸಿರುತ್ತಾರೆ. ಡಿಸ್ಟ್ರಿಬ್ಯೂಟರಗಳು ನೂರರ ಲೆಕ್ಕದಲ್ಲಿ ಸಾಬೂನಿನ ಪ್ಯಾಕೆಟಗಳನ್ನು ಖರೀದಿಸುತ್ತಾರೆ. ಆತನಿಗೆ 7–10% ಲಾಭ ವಿರುತ್ತದೆ. ಡಿಸ್ಟ್ರಿಬ್ಯೂಟರಗಳು ಆ ಜಿಲ್ಲೆಯ ಅಂಗಡಿಗಳಿಗೆ ಹತ್ತರ ಲೆಕ್ಕದಲ್ಲಿ ತಲುಪಿಸುತ್ತಾರೆ. ಆ ಅಂಗಡಿಕಾರನಿಗೆ ಅದರಲ್ಲಿ ಸುಮಾರು 15% ಲಾಭವಿರುತ್ತದೆ.
ಡೀಮಾರ್ಟ, ರಿಲಾಯನ್ಸ, ಮೋರ ನಂತಹ ರಿಟೇಲ ಚೈನ ಕಂಪನಿಗಳು ನೇರವಾಗಿ ತಯಾರಕರಿಂದ ಸಾಬೂನನ್ನು ಖರೀದಿಸಿ ತಮ್ಮದೇ ಆದ ಸಾಗಾಣಿಕೆಯ ವ್ಯವಸ್ಥೆ ಮಾಡಿಕೊಂಡು ತಮ್ಮ ಸ್ಟೋರಗಳಿಗೆ ತರುತ್ತವೆ. ಹೀಗಾಗಿ C&F ಏಜಂಟರುಗಳಿಗೆ ಸಿಗಬೇಕಾದ ಲಾಭ, ಡಿಸ್ಟ್ರಿಬ್ಯೂಟರಗಳಿಗೆ ಸಲ್ಲಬೇಕಾದ ಲಾಭ, ಅಂಗಡಿಕಾರರಿಗೆ ಸಲ್ಲಬೇಕಾದ ಲಾಭ ಎಲ್ಲವನ್ನೂ ತಾವೇ ಗುಳುಂ ಮಾಡುತ್ತಾರೆ. ಅಂದರೆ ರೂ.100 ರ ಬೆಲೆಗೆ ಮಾರುವ ಸಾಬೂನು ಇವರಿಗೆ ರೂ. 65–70 ಕ್ಕೆ ದೊರಕಿರುತ್ತದೆ. ಹೀಗಾಗಿ ಅವರಿಗೆ ಮುದ್ರಿತ MRP ಬೆಲೆಗಿಂತ ಕಡಿಮೆ ಬೆಲೆಗೆ ಮಾರಲು ಸಾಧ್ಯವಿರುತ್ತದೆ.
ನಂತರ ಇವರೇನು ಮಾಡುತ್ತಾರೆಂದರೆ, ಸಾರ್ವಜನಿಕರಿಗೆ ರೂ.100.00 ರ ಬೆಲೆಯ ವಸ್ತುವನ್ನು ರೂ.98.50 ಗೆ ಮಾರಾಟ ಮಾಡಿ, ನೀವು ರೂ 1.50 ಉಳಿತಾಯ ಮಾಡಿದ್ದೀರೆಂದು ದೊಡ್ಡದಾಗಿ ತೋರಿಸುತ್ತವೆ.