ರವೆಉಂಡೆಗೆ ಅದರದ್ದೇ ಆದ ಸ್ಥಾನವಿದೆ. ಹಬ್ಬಗಳಲ್ಲಿ,ಅದರಲ್ಲೂ ಮಹಾಶಿವರಾತ್ರಿ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿಗಳಲ್ಲಿ ಇದು ಇರಲೇಬೇಕು. ಇತ್ತೀಚೆಗೆ ರವೆಯಿಂದ ಸುಮಾರು ಸಿಹಿತಿಂಡಿ ತಯಾರಿಸುತ್ತೇವೆ. ಆದರೂ ಅದೆಲ್ಲವು ರವೆಉಂಡೆಯಷ್ಟು ರುಚಿ ಬರುವುದಿಲ್ಲ.ಇದೇ ರವೆಉಂಡೆಗೆ ಸ್ವಲ್ಪ ಚೇಂಚ್ ಇರಲಿ ಅಂತ ಹಾಲಿನ ಪುಡಿ ಬೆರೆಸಿ ತಯಾರಿಸಿ ನೋಡೋಣ ಹೇಗೆ ಬರುತ್ತೆ ಅಂತ ಪ್ರಯತ್ನಿಸಿದೆ.ಮತ್ತು ಅದರ ಜೊತೆ ಕೇಸರಿ ಮತ್ತು ರೋಸ್ ವಾಟರ್ ಬೆರೆಸಿ,ಸ್ವಂತಃ ಕ್ರಿಯೇಟಿವ್ ಆದ ರವೆಉಂಡೆ ತಯಾರಿಸೋಣ ಎನಿಸಿತು. ತುಂಬಾ ಚೆನ್ನಾಗಿಯೇ ಬಂತು,ಆಗಾಗಿ ಆ ರೆಸಿಪಿ ಬರೆಯೋಣ ಎನಿಸಿತು. ಅದನ್ನು ತಯಾರಿಸುವ ಬಗೆ ತಿಳಿಯೋಣ ಬನ್ನಿ.
ರವೆ ಮತ್ತು ಹಾಲಿನಪುಡಿಯ ಉಂಡೆ:
ಬೇಕಾಗುವ ಸಾಮಗ್ರಿಗಳು:
ರವೆ – ಎರಡು ಕಪ್
ಸಕ್ಕರೆ – ಎರಡು ಕಪ್
ಕೊಬ್ಬರಿ ತುರಿ- ಒಂದು ಕಪ್
ಹಾಲಿನ ಪುಡಿ – ನಾಲ್ಕು ದೊಡ್ಡ ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ
ಬಾದಾಮಿ
ರೋಸ್ ವಾಟರ್/ಗುಲಾಬಿ ನೀರು – ಒಂದು ಚಮಚ
ಕೇಸರಿ ದಳಗಳು – ಅರ್ಧ ಚಮಚ
ಏಲಕ್ಕಿ ಪುಡಿ ಸ್ವಲ್ಪ
ಹಾಲು – ಅರ್ಧ ಕಪ್
ತುಪ್ಪ – ನಾಲ್ಕು ಚಮಚ
ತಯಾರಿಸುವ ರೀತಿ:
ದಪ್ಪ ತಳದ ಅಥವಾ ನಾನ್ ಸ್ಟಿಕ್ ಪಾತ್ರೆಯಲ್ಲಿ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಘಂ ಎನ್ನುವಂತೆ ಚೆನ್ನಾಗಿ ಹುರಿದುಕೊಳ್ಳಿ. ಹದವಾದ ಉರಿಯಲ್ಲಿ ಹುರಿದರೆ ಒಳ್ಳೆಯದು. ಇಲ್ಲವೆಂದರೆ ರವೆ ಸೀದು ಹೋಗುತ್ತದೆ.
ಅದಕ್ಕೆ ಸಕ್ಕರೆ ಸೇರಿಸಿ,ಬೆರೆಸಿ,ಕೊಬ್ರಿತುರಿ ಮತ್ತು ಹಾಲಿನ ಪುಡಿ ಕೂಡ ಹಾಕಿ. ದ್ರಾಕ್ಷಿ,ಗೋಡಂಬಿ,ಬಾದಾಮಿ,ರೋಸ್ ವಾಟರ್/ಗುಲಾಬಿ ನೀರು,ಕೇಸರಿ ದಳಗಳು ಮತ್ತು ಏಲಕ್ಕಿ ಪುಡಿ ಸೇರಿಸಿ,ಚೆನ್ನಾಗಿ ಬೆರೆಸಿ. ಅದಕ್ಕೆ ತುಪ್ಪ ಮತ್ತು ಕಾಲು/ಅರ್ಧ ಕಪ್ ಹಾಲು ಹಾಕಿ ಚೆನ್ನಾಗಿ ಕೈ ಆಡಿಸಿ,ಒಂದೆರಡು ನಿಮಿಷ ಬೆರೆಸಿ,ಚೆನ್ನಾಗಿ ತಿರುವಿ,ಒಲೆಯಿಂದ ಕೆಳಗಿಳಿಸಿ. ಸ್ವಲ್ಪ ತಣ್ಣಗಾದ ಮೇಲೆ ಹಾಲಿನ / ತುಪ್ಪದ ಕೈ ನಿಂದ ರವೆಯ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು, ನಿಮಗೆ ಯಾವ ಗಾತ್ರದ ಉಂಡೆ ಬೇಕೋ ಆ ರೀತಿ ಉಂಡೆ ತಯಾರಿಸಿ. ರುಚಿಕರವಾದ ರವೆಉಂಡೆ ಸವಿಯಲು ತಯಾರಾಗುತ್ತದೆ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುತ್ತವೆ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟು ಕೆಲವು ದಿನ ಸ್ಟೋರ್ ಮಾಡಿಟ್ಟುಕೊಂಡು ತಿನ್ನಬಹುದು. ಫ್ರಿಡ್ಜ್ ನಲ್ಲಿ ಇಟ್ಟರೆ ಸುಮಾರು ದಿನ ಇರುತ್ತದೆ.
* ಉಂಡೆಗಳು ಸ್ವಲ್ಪ ಸಾಪ್ಟ್/ಮೆದುವಾಗಿ ಇರಬೇಕೆಂದರೆ ಇನ್ನೂ ಸ್ವಲ್ಪ ಹಾಲನ್ನು ಹೆಚ್ಚಿಗೆ ಬೆರೆಸಬಹುದು.
* ಸಕ್ಕರೆಯನ್ನು ಪುಡಿ ಮಾಡಿ ಸಹ ಹಾಕಬಹುದು.
* ರವೆಯನ್ನು ಸೀದಿಸಿಕೊಂಡು ಹುರಿಯಬೇಡಿ.
* ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಂಡು ಬೇಕಾದರು ಸೇರಿಸಬಹುದು.
* ರವೆಯ ಮಿಶ್ರಣವನ್ನು ತುಂಬಾ ತೆಳುವಾಗಿ /ಪುಡಿ ಪುಡಿಯಾಗಿ ತಯಾರಿಸದೆ, ಸರಿಯಾದ ಹದದಲ್ಲಿ ತಯಾರಿಸಿದರೆ ಉಂಡೆಗಳನ್ನು ಕಟ್ಟಲು ಸುಲಭವಾಗುತ್ತದೆ.